ಬ್ಲಾಕ್, ಅಲೆಕ್ಸಾಂಡರ್
	1880-1921. ರಷ್ಯದ ಖ್ಯಾತ ಕವಿ. ಪ್ರತಿಮಾ ವಿಧಾನದ ಸಾಹಿತಿಗಳಲ್ಲಿ ಅಗ್ರಗಣ್ಯ. ಜೊಕಾಫ್‍ಸ್ಕಿ, ಸಲಾನಿ ಎಫ್, ಹಿವಿಯಸ್‍ರ ಪ್ರಭಾವಕ್ಕೆ ಒಳಗಾದವ. ಹುಟ್ಟಿದ್ದು ಸೇಂಟ್ ಪೀಟರ್ಸ್‍ಬಗ್ರ್ಸ್‍ನಲ್ಲಿ. ಈತನ ತಂದೆ ವಾರ್‍ಸಾ ವಿಶ್ವವಿದ್ಯಾಲಯದ ಸಾರ್ವಜನಿಕ ಕಾನೂನು ಶಾಸ್ತ್ರದ ಪ್ರಾಧ್ಯಾಪಕ. ಈತನ ಅಜ್ಜ (ತಾಯಿಯ ತಂದೆ) ಪೀಟರ್ಸ್‍ಬರ್ಗ್ ವಿಶ್ವವಿದ್ಯಾಲಯದ ರೆಕ್ಟರ್. ಮದುವೆಯಾದ ಒಂದು ವರ್ಷದಲ್ಲಿಯೇ ಈತನ ತಾಯಿ ಈತ ಹುಟ್ಟುವ ಮೊದಲೇ ಗಂಡನಿಂದ ಬೇರೆಯಾಗಿದ್ದಳು. ಹೀಗಾಗಿ ಬ್ಲಾಕ್ ಬಾಲ್ಯವನ್ನು ಅಜ್ಜನ (ತಾಯಿಯ ತಂದೆ) ಮನೆಯಲ್ಲಿ ಕಳೆದ. ಮೊದಲ ಕವನ 1900ರಲ್ಲಿಯೇ ಬೆಳಕು ಕಂಡು ಜನಪ್ರಿಯತೆ ಗಳಿಸಿತು. ಮೊದಲ ಪುಸ್ತಕವಾದ `ವರ್ಸಸ್ ಎಬೌಟ್ ದಿ ಬ್ಯೂಟಿಫುಲ್ ಲೇಡಿ 1904ರಲ್ಲಿ ಪ್ರಕಟಗೊಂಡಿತು. ಕವನಗಳಲ್ಲಿ ರೊಮ್ಯಾಂಟಿಸಿಸಮ್, ಅನುಭಾವ ಎರಡನ್ನೂ ಕಾಣಬಹುದು. ಬಾಹ್ಯಜಗತ್ತಿನ ಹಿಂದೆ ಈತನಿಗೆ ಆಧ್ಯಾತ್ಮಿಕ ನಿತ್ಯಸತ್ಯಗಳು ಗೋಚರವಾಗುತ್ತಿದ್ದುವು. ಪ್ರೇಮಗೀತೆಗಳಲ್ಲಿ ಹೃದಯೇಶ್ವರಿ (ಸೋಫಿಯ) ಅಮರಜ್ಞಾನ ಸ್ವರೂಪಿಣಿ. ಈತನ ಕೃತಿಗಳು ಸಾಮಾನ್ಯ ವಾಚಕರಿಗೆ ಅರ್ಥವಾಗದಿದ್ದರೂ ಪ್ರತೀಕಮಾರ್ಗದ ತರುಣಸಾಹಿತಿಗಳು ಈತನಿಂದ ಹೊಸದೊಂದು ಧಾರ್ಮಿಕ ಸಾಕ್ಷಾತ್ಕಾರವಾಗುವುದೆಂದು ನಂಬಿದ್ದರು. 1904-06ರ ಅವಧಿಯಲ್ಲಿಯ ಕವನಗಳಲ್ಲಿ ಸ್ಪಪ್ನಸದೃಶ ವಾತಾವರಣವುಂಟು. 1908 ರಿಂದ 1916ರ ತನಕ ರಚಿಸಿದ ಭಾವಗೀತೆಗಳಲ್ಲಿ ಪರಿಪಕ್ವ ಪ್ರತಿಭೆಯ ಫಲ ಗೋಚರಿಸುತ್ತದೆ. 1905ರ ವಿಫಲಕ್ರಾಂತಿಯ ಅನಂತರದ ಕವನಗಳಲ್ಲಿ ವಿಷಾದ ಮತ್ತು ವ್ಯಂಗ್ಯಗಳು ಇವೆ. ಈ ಕವನಗಳಲ್ಲಿ ವಾಸ್ತವಿಕತೆ ಹೆಚ್ಚಾಗಿದೆ. 1917ರ ಕ್ರಾಂತಿಯನ್ನು ಪ್ರಪಂಚಕ್ಕೆ ಹೊಸ ದಾರಿಯನ್ನು ತೋರಿಸುವ ದೀವಿಗೆ ಎಂದು ಸ್ವಾಗತಿಸಿದ. ದಿ ಟ್ವೆಲ್ವ್ (ಹನ್ನೆರಡು) ಕವನದಲ್ಲಿ ಹನ್ನೆರಡು ಮಂದಿ ರಷ್ಯನ್ ಸಿಪಾಯಿಗಳಿಗೆ (ಏಸುಕ್ರಿಸ್ತನ ಹನ್ನೆರಡು ಮಂದಿ ಪ್ರವರ್ತಕ ಪ್ರತಿನಿಧಿಗಳು) ಏಸುಕ್ರಿಸ್ತನೇ ಮಾರ್ಗದರ್ಶನ ಮಾಡುತ್ತಾನೆ. ಬ್ಲಾಕ್‍ನ ಸಂಗೀತದ ಪ್ರತಿಭೆಯ ಮಹಾಸಾಧನೆ ಇದು. ಆದರೆ ಕ್ರಮೇಣ ಕ್ರಾಂತಿಯಲ್ಲಿ ಇವನಿಗಿದ್ದ ಉತ್ಸಾಹ ನಂಬಿಕೆಗಳು ಮರೆಯಾದುವು.			 (ಎಲ್.ಎಸ್.ಎಸ್.; ಎಚ್.ಎಸ್.ಎಚ್.)

	`ವರ್ಸಸ್ ಎಬೌಟ್ ದಿ ಬ್ಯೂಟಿಫುಲ್ ಲೇಡಿ ಕವನದಲ್ಲಿ ದಿವ್ಯಜ್ಞಾನವನ್ನು ಸ್ತ್ರೀಯ ಚೇತನದೊಂದಿಗೆ ಸಮೀಕರಿಸಲಾಗಿದೆ. 1906ರಲ್ಲಿ ಪ್ರಕಟವಾದ `ಅಪರಿಚಿತ ಸ್ತ್ರೀ ಕವನದಲ್ಲಿ ನಿರಾಸೆಯು ಮಸುಕಿದೆ. 1917ರ ಕ್ರಾಂತಿಯು ಹೊಸ ಭರವಸೆಯನ್ನು ತಂದಾಗ ಪ್ರತಿಮಾ ವಿಧಾನವು ನಿಷ್ಫಲ ಬೌದ್ಧಿಕತೆ ಎಂದು ಅದನ್ನು ಬಿಟ್ಟು, ರಷ್ಯದ ವಿಜಯವನ್ನು ಸಾರಲು ಪ್ರಾರಂಭಿಸಿದ. ಸೋವಿಯತ್ ರಷ್ಯದಲ್ಲಿ ಬರಹಗಾರರು ಪಕ್ಷದ ವಕ್ತಾರರಾಗಬೇಕೆಂಬ ಒತ್ತಾಯವು ಇವನಿಗೆ ಭ್ರಮನಿರಸನವನ್ನು ತಂದಿತು. 
	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

										(ಎಲ್.ಎಸ್.ಎಸ್.)